ಕೆನ್ನೀಲಿಕೆ 1

ಚರ್ಮದ ಕೆಳಗೆ ದೊಡ್ಡ ಅಥವಾ ಚಿಕ್ಕ ರಕ್ತಸ್ರಾವಗಳ ದದ್ದುಗಳಾಗುವ ಜಾಡ್ಯ (ಪಪ್ರ್ಯುರ). ಈ ರೀತಿ ರಕ್ತಸ್ರಾವಗಳು ಒಳಮಾಂಸ ವಿಶೇಷಗಳಲ್ಲೂ ಒಳಾವಕಾಶಗಳಲ್ಲೂ ಆಗಬಹುದು. ಗಡ್ಡೆ ಕಟ್ಟುವ ಸ್ವಭಾವವನ್ನು ರಕ್ತ ಕಳೆದುಕೊಂಡು ರಕ್ತಸ್ರಾವ ಸುಲಭವಾಗಿ ಆಗುವುದು ಅಥವಾ ನಿಲ್ಲದಿರುವುದರಿಂದ ಹೀಗಾಗುತ್ತದೆ. ಇದರ ಮುಖ್ಯ ಕಾರಣಗಳು ಐದು: 

(1) ಸಣ್ಣ ಶುದ್ಧ ರಕ್ತನಾಳಗಳ ಭಿತ್ತಿ ಶಿಥಿಲಗೊಳ್ಳುವುದು (ರಕ್ತನಾಳ ಕೆನ್ನೀಲಿಕೆ). ವಿಟಮಿನ್ ಸಿ ಕೊರತೆಯಿಂದ ತಲೆದೋರುವ ಸ್ಕರ್ವಿ ಎಂಬ ರೋಗ, ಕ್ರಿಮಿರೋಗ, ವೈರಸ್ ರೋಗ, ಒಗ್ಗದಿಕೆಯ ಪ್ರತಿಕ್ರಿಯೆ ಇವೇ ಮುಂತಾದವುಗಳಲ್ಲಿ ರಕ್ತನಾಳಗಳು ಶಿಥಿಲಗೊಳ್ಳುತ್ತವೆ. ಅವು ಸಮರ್ಪಕವಾಗಿದ್ದಂತೆ ಕಂಡರೂ ಗಾಯವಾದಾಗ ಸಂಕೋಚವಾಗದೆ ರಕ್ತ ಸೋರುವ ವಂಶಪಾರಂಪರ್ಯರೋಗವಾದ ಹುಸಿ ಹೀಮೊಫಿಲಿಯದಿಂದ ಕೆನ್ನೀಲಿಕೆ ಉಂಟಾಗುತ್ತದೆ. 

(2) ರಕ್ತ ಗಡ್ಡೆಕಟ್ಟಲು ಬೇಕಾಗುವ ರಾಸಾಯನಿಕ ವಸ್ತುಗಳು ಮತ್ತು ರಕ್ತನಾಳಗಳಲ್ಲಿ ತಲೆದೋರಬಹುದಾದ ತೂತುಗಳನ್ನು ಮುಚ್ಚಲು ಬೇಕಾದ ಕಿರಿಬಿಲ್ಲೆಗಳು ಇವುಗಳಿಗೆ ಪ್ಲೇಟ್‍ಲೆಟ್ ಎಂದು ಹೆಸರು. ಇದರ ನ್ಯೂನತೆ ಒಂದು ಕಾಯಿಲೆ, ಥ್ರಾಂಬೊಸೈಟೊಪಿನಿಯ ಎಂದು ಅದರ ಹೆಸರು. ಇದಕ್ಕೆ ಕಾರಣಗಳು - ಲ್ಯೂಕೀಮಿಯ ರೋಗ. ಕೆಲವು ಮದ್ದುಗಳಿಂದ ಅಥವಾ ಎಕ್ಸ್‍ಕಿರಣಗಳಿಂದ ಎಲುಬಿನ ಮಜ್ಜೆಯಲ್ಲಿರುವ ಮೆಗಕ್ಯಾರಿಯೊಸೈಟ್ಸ್ ಎಂಬ ಅತಿದೊಡ್ಡ ಕಣಗಳ ನಾಶ ಅಥವಾ ಉತ್ಪತ್ತಿಯಾಗದಿರುವಿಕೆ.

(3) ಗುಲ್ಮ ಅಥವಾ ರಕ್ತದಲ್ಲಿ ಉತ್ಪತ್ತಿಯಾಗುವ ಪ್ರತಿವಸ್ತುಗಳೆಂಬ (ಆಂಟಿಬಾಡಿಸ್) ಪ್ರೋಟೀನ್‍ಗಳು ಅತಿಯಾಗಿ ಪ್ಲೇಟೆಲೆಟ್‍ಗಳನ್ನು ನಾಶಮಾಡುವುದರಿಂದ ಕೆನ್ನೀಲಿಕೆಯುಂಟಾಗಬಹುದು. ಲ್ಯೂಪಸ್ ಎರಿಥಿಮಟೋಸಿಸ್ ಮುಂತಾದ ರೋಗಗಳಿಂದಲೂ ವೈರಸ್, ಕ್ರಿಮಿ ಮತ್ತು ಕೆಲವು ಮದ್ದುಗಳ ಪ್ರಭಾವದಿಂದಲೂ ಪ್ಲೇಟ್‍ಲೆಟ್‍ಗಳನ್ನು ನಾಶಪಡಿಸುವ ಪ್ರತಿವಸ್ತುಗಳು ಉತ್ಪತ್ತಿಯಾಗುತ್ತದೆ. ಥ್ರಾಂಬ್ಯಾಸ್ತೀನಿಯ ಎಂಬ ರೋಗದಲ್ಲಿ ಪ್ಲೇಟ್‍ಲೆಟ್‍ಗಳ ಸಂಖ್ಯೆ ರಕ್ತದಲ್ಲಿ ಸರಿಯಾಗಿದ್ದರೂ ಅಶಕ್ತತೆಯಿಂದಾಗುವ ಅಸಮರ್ಪಕ ಕೆಲಸದ ಪರಿಣಾಮವಾಗಿ ಕೆನ್ನೀಲಿಕೆ ರೋಗ ತಲೆದೋರುತ್ತದೆ.(3) ಹೀಮೊಫಿಲಿಯ, ಕ್ರಿಸ್ಮಸ್‍ರೋಗ, ಹೈಪೊಪ್ರೊಥ್ರಾಂಬಿನೀಮಿಯ, ಎಫೈಬ್ರಿನೊಜೆನೀಮಿಯ ಮುಂತಾದ ವಂಶಪಾರಂಪರ್ಯ ರೋಗಗಳಲ್ಲಿ ಮತ್ತು ಕೆಲವು ಯಕೃತ್ ರೋಗಗಳಲ್ಲಿ ಕೆನ್ನೀಲಿಕೆ ಉಂಟಾಗುತ್ತದೆ. ಅಲ್ಲದೇ ರಕ್ತಗರಣೆ ತಪ್ಪಿಸುವ ಮದ್ದು ಮುಂತಾದವುಗಳಿಂದ ರಕ್ತಗರಣೆಗೆ ಬೇಕಾದ ಸಾಮಗ್ರಿಗಳ ಕೊರತೆ ರಕ್ತದಲ್ಲುಂಟಾಗುವುದರಿಂದ ಕೆನ್ನೀಲಿಕೆ ತಲೆದೋರುವುದು.
 
(4) ಮಲ್ಟಿಪಲ್‍ಮೈಲೋಮ, ಲ್ಯೂಕೀಮಿಯ ಮುಂತಾದ ರಕ್ತ ರೋಗಗಳಿಂದಲೂ ಕೆಲವು ಮದ್ದುಗಳ ಪ್ರತಿಕ್ರಿಯೆಗಳಿಂದಲೂ ನಾರುಮಾಂಸದ ರೋಗಗಳಿಂದಲೂ ಎಕ್ಸ್‍ಕಿರಣಗಳ ಮಿತಿಮೀರಿದ ಪರಿಣಾಮದಿಂದಲೂ ರಕ್ತಗರಣೆಯನ್ನು ತಡೆಗಟ್ಟುವ ಪ್ರೋಟೀನ್ ಪ್ರತಿವಸ್ತು ವಿಶೇಷಗಳಿಂದಲೂ ರಕ್ತದಲ್ಲಿರುವ ಗಡ್ಡೆಕಟ್ಟುವ ತಂತ್ರಕ್ಕೆ ಅಡಚಣೆಯಾಗಿ ಕೆನ್ನೀಲಿಕೆಯುಂಟಾಗಬಹುದು. 

(5) ರಕ್ತಗಡ್ಡೆಯನ್ನು ಕರಗಿಸಬಲ್ಲ ಏರ್ಪಾಡೊಂದು ಸಾಧಾರಣವಾಗಿ ಸುಪ್ತಸ್ಥಿತಿಯಲ್ಲಿರುತ್ತದೆ. ಇದು ಕೆಲವು ಸಂದರ್ಭಗಳಲ್ಲಿ ಜಾಗೃತವಾದಾಗ ಕರಗಿದ ರಕ್ತಗಡ್ಡೆಯ ನೀಸಿನಿಂದ ರಕ್ತಗರಣೆಗೆ ಆತಂಕವುಂಟಾಗುತ್ತದೆ. ಬಸಿರು, ಹೆರಿಗೆ ಮತ್ತು ಶಸ್ತ್ರಕ್ರಿಯೆಗಳಲ್ಲಿ ಆಗಬಹುದಾದ ಆಕಸ್ಮಿಕಗಳಿಂದ ಈ ರೀತಿಯಾಗಬಹುದು. ಮೂರ್ಛೆ, ಆಕಸ್ಮಿಕ ಗಾಯ, ಸುಟ್ಟಗಾಯ ಮತ್ತು ಇನ್ನೂ ಇಂಥ ಸ್ಥಿತಿಗಳಲ್ಲಿ ಕೆಟ್ಟ ಮಾಂಸದ ಸಾರ ರಕ್ತವನ್ನು ಸೇರಿ ರಕ್ತನಾಳಗಳಲ್ಲಿ ಗರಣೆಯುಂಟುವಾಡುವುದರಿಂದ ಒಂದು ರೀತಿಯ ವಿಪರ್ಯಾಸ ರಕ್ತಸ್ರಾವ ಸ್ಥಿತಿಯುಂಟಾಗುತ್ತದೆ. ರಕ್ತ ಗಡ್ಡೆಕಟ್ಟಲು ಬೇಕಾದ ವಸ್ತುಗಳ ಕುಂದು ರಕ್ತದಲ್ಲುಂಟಾಗುವುದೇ ಇದರ ಕಾರಣ. ಪ್ರಸವದಲ್ಲಿ ಕೆಲವೇಳೆ ಆಗಬಹುದಾದ ಅತಿರಕ್ತಸ್ರಾವಕ್ಕೂ ದೇಹದಲ್ಲಾಗುವ ಈ ಅವ್ಯವಸ್ಥೆಯೇ ಕಾರಣ.

ಚಿಕಿತ್ಸೆ: ಕೆನ್ನೀಲಿಕೆಗೆ ಚಿಕಿತ್ಸೆ ಕಾರಣಕ್ಕೆ ತಕ್ಕಂತೆ ನಡೆಯಬೇಕು. ರಕ್ತದಲ್ಲಿ ಅತಿಕಡಿಮೆ ಪ್ಲೇಟ್‍ಲೆಟ್ ಸಂಖ್ಯೆಯಿಂದಾಗುವ ಕೆನ್ನೀಲಿಕೆ ಅಥವಾ ನಿಲ್ಲದ ರಕ್ತಸೋರಿಕೆಗೆ ಆಡ್ರಿನೋ ಕಾರ್ಟಿಕೋಟ್ರೋಫಿಕ್ ಹಾರ್ಮೋನ್(ಂಅಖಿಊ) ಮತ್ತು ಸ್ಟಿರಾಯ್ಡ್ ಒಳರಸಗಳು ಪರಿಣಾಮಕಾರಿಗಳು. ರಕ್ತದಾನದಿಂದ ಪ್ಲೇಟ್‍ಲೆಟ್‍ಗಳು ರೋಗಿಗೆ ಸೇರುವಂತೆ ಮಾಡುವುದು ಲಾಭಕರ ಸಾಧನೆ. ಪ್ಲೇಟೆಲೆಟ್ ಕೊರತೆಯ ಕೆನ್ನೀಲಿಕೆಯಲ್ಲಿ ಇತರ ಎಲ್ಲ ಚಿಕಿತ್ಸೆಗಳು ನಿಷ್ಪ್ರಯೋಜಕವಾದಾಗ ಪ್ಲೇಟೆಲೆಟ್‍ಗಳನ್ನು ನಾಶಪಡಿಸುತ್ತಿರುವ ಪ್ಲೀಹವನ್ನು ಶಸ್ತ್ರಕ್ರಿಯೆಯಿಂದ ತೆಗೆದುಹಾಕುವುದು ಕೊನೆಯ ಚಿಕಿತ್ಸಾ ವಿಧಾನ. ರಕ್ತದಾನ, ಪ್ಲಾಸ್ಮ (ಕಣಗಳಿಲ್ಲದ ರಕ್ತ) ಅಥವಾ ರಕ್ತದಲ್ಲಿ ಯಾವ ಅಂಶ (ಫೈಬ್ರಿನೊಜೆನ್), ಆಂಟಿಹೀಮೊಫಿಲಿಕ್, ಗ್ಲಾಬ್ಯುಲಿನ್ ಇತ್ಯಾದಿ ಪ್ರೋಟೀನುಗಳು ಇಲ್ಲವೋ ಅದನ್ನು ರೋಗಿಯ ರಕ್ತಕ್ಕೆ ಸೇರಿಸುವುದು ರಕ್ತಗರಣೆ ಶಕ್ತಿಯ ಅಭಾವದಿಂದಾಗುವ ತೀವ್ರರಕ್ತಸ್ರಾವದ ಚಿಕಿತ್ಸೆಯ ಮುಖ್ಯ ವಿಧಾನ.			
(ಎಂ.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ